ಹುಡುಗ್ರಾಟ !! ಎಂಥಾ ವಿಚಿತ್ರ ತಲೆಬರಹ, ಬರೆಯುವಾಗ ತಪ್ಪಾಗಿರಬೇಕು,
ಅಂತ ನೀವು ಅಂದ್ಕೊಂಡ್ರೆ ಖಂಡಿತ ಅದು ನಿಮ್ಮದೇ ತಪ್ಪು. ಯಾರೂ ತಪ್ಪು ತಿಳಿದುಕೊಳ್ಳದಿರಲಿ ಅಂತ ಒಪ್ಪವಾಗಿ "ಹುಡುಗರ ಹುಡುಗಾಟ" ಅನ್ನೋ ಅಡಿಬರಹ ಬೇರೆ ಕೊಟ್ಟಿದ್ದೇನೆ. ಆ ಎರಡು ಶಬ್ದಗಳನ್ನು ಒಂದು ಸಾರಿ ಸರಿಯಾಗಿ ಓದಿದ್ರೂ ತಲೆಬರಹದ ಪೂರ್ತಿ ಹಣೆಬರಹ ಅರ್ಥ ಆಗುತ್ತೆ.
ತಮ್ಮ ಜೀವನದ ಕೇವಲ ಕಾಲು ಭಾಗ ಕಳೆದಿರುವ ನನ್ನಂತವರಿಗೆ ನಿನ್ನ ಲೈಫ್‌ನ ಮರೆಯಲಾಗದ ದಿನಗಳು ಯಾವವು ಅಂದರೆ, ಒಂದು ಕ್ಷಣವೂ ಯೋಚಿಸದೇ ಬರುವ ಉತ್ತರ ಸ್ಕೂಲ್/ಕಾಲೇಜ್ ಡೇಸ್. ಎಂಥಾ ಸುಂದರ ದಿನಗಳು ಅವು, ಸಂಸಾರ ತಾಪತ್ರಯಗಳಿಲ್ಲ ಜಗತ್ತಿನ ಜಂಜಾಟಗಳಿಲ್ಲ ಇರಿವುದೇನಿದ್ದರು ನಾವು ಮತ್ತು ನಮಗೆಂದು ನಾವೇ ಕಟ್ಟಿಕೊಂಡ ನಮ್ಮದೇ ಆದ ಲೋಕ. ಆ ಲೋಕಕ್ಕೆ ನಾವೇ ಮಾಲೀಕ. ಬೇರೆಯವರು ಹೇಳಿದ್ದು ಕೇಳಬಾರದು, ರೂಲ್ಸ್ಗಳನ್ನ ಸೀರಿಯಸ್ಸಾಗಿ ತೊಗೋಬಾರದು, ಖುಷಿ ವಿಷಯದಲ್ಲಿ ಯಾವತ್ತೂ ರಾಜಿ ಆಗಬಾರದು ಇವೆ ಮೊದಲಾದವು ಅಲ್ಲಿಯ ಅಲಿಖಿತ ನಿಯಮಗಳು. ಇಂತಹ ನಿಯಮಗಳಿಗೆ ಫೆವಿಕೋಲ್ಗಿಂತ ಗಟ್ಟಿಯಾಗಿ ಅಂಟಿಕೊಂಡು ಕಳೆದ ಆ ದಿನಗಳು ನೆನಪಿನ ಪುಟದಲ್ಲಿ ಇನ್ನೂ ಬೆಚ್ಚಗೆ ಅಚ್ಚಾಗಿ ಕೂತಿವೆ.
ಇಂತಹ ಅಚ್ಚಾಗಿ ಕೂತ ನೆನಪುಗಳಲ್ಲಿ ಹೆಚ್ಚಾಗಿರುವುದು ಚಿಕ್ಕಂದಿನ ಹುಡುಗಾಟಗಳು. ಅವು ಎಷ್ಟೋ ಬಾರಿ ನಾವು ಒಬ್ಬರೇ ಇದ್ದಾಗ ನೆನಪಾಗಿ ನಗುತರಿಸಿರುವುದೂ ಉಂಟು. ಅಂದಿನ ಆ ಹುಡುಗಾಟಗಳಿಗೆ ಕಾರಣ ಹುಡುಕುವುದಾಗಲಿ ಇಲ್ಲಾ ಸರಿ ತಪ್ಪು ಎಂದುವಿಶ್ಲೇಷಣೆ ಮಾಡುವುದಾಗಲಿ ನನ್ನ ಉದ್ದೇಶವಲ್ಲ. ನಿಮ್ಮೊಂದಿಗೆ ನನ್ನ ಬಾಲ್ಯದ ಕಪಿ ಚೇಷ್ಟೆಗಳನ್ನು ಹಂಚಿಕೊಳ್ಳುವುದು ಮತ್ತು ಸಾಧ್ಯವಾದರೆ ನಿಮ್ಮನ್ನೂ ಕೆಲ ಕಾಲ ನಿಮ್ಮ ಬಾಲ್ಯದ ನೆನೆಪಿನಂಗಳಕ್ಕೆ ನೂಕುವುದು ಅಷ್ಟೇ ನನ್ನ ಉದ್ದೇಶ. ಅದನ್ನು ಈಡೇರಿಸಲೆಂದೇ ಈ ಅಂಕಣ.. ನನ್ನೆಲ್ಲಾ ಹುಡುಗಾಟದಲ್ಲಿ ನನ್ನ ಗೆಳೆಯರದ್ದೂ ನನ್ನಷ್ಟೇ ಪಾಲಿದೆ, ಅದಕ್ಕಾಗಿಯೇ ಈ ಅಂಕಣ ಬರಿ ಹುಡುಗಾಟ ಆಗಿರದೇ ಹುಡುಗ್ರಾಟ ಆಗಿದೆ. ನೆನಪಿನ ಬುತ್ತಿಯಿಂದ ಒಂದೊಂದೇ ತುತ್ತನ್ನು ಈ ಅಂಕಣದಲ್ಲಿ ತೆರೆದಿಡ್ತೀನಿ, ಓದ್ತೀರಾ ಅಲ್ವಾ?? ಬರಿ ಓದಿದ್ರೆ ಸಾಲ್ದು , ನಿಮ್ಮ ಕಥೇನೂ ಹೇಳಿ ನಾನ್ ಕೇಳ್ತೀನಿ .

ಒಃಹ್ ಆಗಲೇ ಹುಡುಗ್ರಾಟದ ಕಥೆಗಳಿಗೆ ಹುಡುಕಾಟ ಶುರು ಮಾಡಿದ್ರಾ?? ಒಂದೇ ದಿನ ಎಲ್ಲಾ ಬಂಗಾರದ ಮೊಟ್ಟೆ ಪಡೆಯುವ ಆಸೆಯೋ?? ( ಗೊತ್ತು ನನ್ನ ಕಥೆಗಳು ಬಂಗಾರದ ಮೊಟ್ಟೆಗಳಲ್ಲ ಅಂತ, ಸುಮ್ನೇ ತಮಾಷೆಗೆ) .
ನಿಮ್ಮವ,
ಹರಟೆ ಮಲ್ಲ
No comments:
Post a Comment