Thursday, April 22, 2010

ಅವನು(ಳು) - ನ್ಯಾನೊ ಕಥೆಗಳು


1) ಅವಳು ಬಿಟ್ಟು ಹೋದ ಜಾಗದಲ್ಲೇ ಅವಳಿಗಾಗಿ ಕಾದ, ಕೂತ ನಿಂತ ತಿರುಗಿದ ಕೊರಗಿದ, ಮುಂಜಾನೆ ಮಧ್ಯಾಹ್ನ ಆಯ್ತು, ಮಧ್ಯಾಹ್ನ ಸಂಜೆ ಆಯ್ತು, ಸಂಜೆ ರಾತ್ರಿಯೂ ಆಯ್ತು, ಆದರೂ ಅವಳ ಮರೆಯದಾದ, ಮನೆಗೆ ಮರಳದಾದ.. ಗಸ್ತು ಪೊಲೀಸರಿಗೆ ಅನುಮಾನ ಬರಲು ಜೈಲು ಪಾಲಾದ..

2) ಅವುಗಳನ್ನೆಲ್ಲ ಒರೆಸಿ ಕಾಗದದಲ್ಲಿ ಸುತ್ತಿ ಚಿಕ್ಕ ಬಾಕ್ಸ್ನಲ್ಲಿ ಹಾಕಿ ಅದನ್ನೊಂದು ಪೆಟ್ಟಿಗೆಯಲ್ಲಿಟ್ಟು ಎರಡೆರಡು ಗೋದ್ರೆಜ್ ಬೀಗ ಜಡಿದು ಹೊತ್ತು ತಂದಿದ್ದ ಅವಳಿಗೆ ಭದ್ರವಾಗಿದೆ ಎಂದು ತೋರಿಸಲು. ಥೂ ಪೆದ್ದು! ಭದ್ರವಾಗಿಟ್ಟುಕೊ ಅಂದಿದ್ದು ಗಿಫ್ಟ್ಗಳನ್ನಲ್ಲ ನನ್ನ ಹಾರ್ಟ್ ನ ಅಂತ ಮುಖ ಕೆಂಪಾಗಿಸಿ ಪಕ್ಕನೆ ನಕ್ಕಳು..

3) ಅವನಿಗೆ ಬಿಡೋ ಮನಸಿರಲಿಲ್ಲ, ಅವಳಿಗೆ ಬೇಡ ಅನ್ನೋ ಮನಸಾಗಲಿಲ್ಲ, ತನ್ನನ್ನೆಲ್ಲಿ ಬಿಟ್ಟು ಹೋಗ್ತಾಳೋ ಅಂತ ಬಿಗಿಯಾಗಿ ಆಸ್ತೆಯಿಂದ ತಬ್ಬಿಕೊಂಡಿದ್ದ. ಆದರೂ ಅವನಿಂದ ಕೊಸರದೇ ಮಿಳುಕದೇ ತಿರುಗಿ ಬಾರದಷ್ಟು ದೂರ ಹೋಗ್ಬಿಟ್ಟಳು, ತಬ್ಬಿಕೊಂಡಿದ್ದ ಬಿಗಿತಕ್ಕೆ ಉಸಿರು ಕಟ್ಟಿತ್ತು.

4) ಬೈಕಲ್ಲಿ ಅವ್ನು ಹೋಗೋವಾಗ ಕಪ್ಪು ಬೆಕ್ಕು ಅಡ್ಡ ಬಂತು ಹಾಳಾದ್ ಬೆಕ್ಕು ಅಪಶಕುನ ಅಂದ. ಹಾಗೆ ಮುಂದೆ ಹೋಗ್ತಿದ್ದಾಗ ಅವಳು ಅಡ್ಡ ಬಂದ್ಲು ಅವಳನ್ನೇ ನೋಡ್ತಾ ನೋಡ್ತಾ ಬೈಕಿಂದ ಬಿದ್ದ ಹಾಳಾದ್ ಬೆಕ್ಕಿನ್ದೆ ಅಪಶಕುನ ಅಂದ.

5) ಓರ್ಕೂಟ್ನಲ್ಲಿ ಅವಳ ಪರಿಚಯ ಆಯ್ತು ಚಾಟ್ ಚಾಟ್ ಅಲ್ಲೇ ಫ್ರೆಂಡ್‌ಶಿಪ್ ಆಯ್ತು ಫ್ರೆಂಡ್‌ಶಿಪ್ ನಿಂದ ಲವ್ವೂ ಆಯ್ತು, ಅವನಿಗೆ ಅವಳ ಮೀಟ್ ಮಾಡೋ ಮನಸಾಗಿ ಮೀಟ್ ಆದ್ರೂ. ಆದರೆ..!! ಅವಳು ಅವನಾಗಿದ್ದ, ಹೈ ಕೋರ್ಟ್ ಡಿಸಿಶನ್ ಪ್ರಿಂಟ್ ಹಿಡ್ಕೊಂಡಿದ್ದ..

Wednesday, March 24, 2010

ಬಿಸಿಲೇ...ಬಿಸಿಲೇ...

ನರಕಕ್ಕೆ ಹೋದ್ರೆ ಕುದಿಯೋ ಎಣ್ಣೇಲಿ ಹಾಕ್ತಾರೆ ಅಂತ ಕೇಳಿ ಮಾತ್ರ ಗೊತ್ತು, ಆದ್ರೆ ಬೆಂಗಳೂರಲ್ಲಿ ಈಗ ಮದ್ಯಾಹ್ನ ಆದ್ರೆ ಸಾಕು ಅದನ್ನ ಅನುಭವಿಸೋ ಹೊತ್ತು...
ಇಷ್ಟು ದಿನ ಅದುಮಿಟ್ಟುಕೊಂಡಿದ್ದ ಕೋಪಾನೆಲ್ಲಾ ಈಗ ಬೆಂಗಳೂರಿನ ಮೇಲೆ ತೆಗೆಯುತ್ತಾ ಇದ್ದಂತಿದೆ ಆ ಸೂರ್ಯ, ಅಷ್ಟು ಸೆಖೆ, ದಗೆ, ಉರಿ ಬಿಸಿಲು. ಜ್ಯಾಕೆಟ್ ಹೆಲ್ಮೆಟ್ ಹಾಕ್ಕೊ೦ಡು ಟ್ರ್ಯಾಫಿಕ್ ಸಿಗ್ನಲ್‌ನಲ್ಲಿ ನಿಂತಕೊನ್ಡಿದ್ರೆ ಮೈಕ್ರೊವೇವ್ ಓವನ್ನಲ್ಲಿ ಇದ್ದಂತ ಅನುಭವ (ಯಾವಾಗ ಕೂತ್ಕೊಂಡು ನೋಡಿದ್ದೆ ಅಂತ ಕೇಳ್ಬೇಡಿ). ನೋಡಕ್ಕೆ ಬೆಂಕಿ ಎಲ್ಲೂ ಕಾಣ್ಸಲ್ಲ ಆದ್ರೆ ಸುಡೋ ಬಿಸಿ ಮಾತ್ರ ತಪ್ಪಲ್ಲಾ, ಜೊತೆಗೆ ಹೊಗೆ ಧೂಳು ಫ್ರೀ ಕೂಡ...

ನಿನ್ನೆ ಬೆಳಿಗ್ಗೆ ಕಿವಿಗೆ ಇಯರ್‌ಫೋನ್ ಹಾಕ್ಕೊ೦ಡು FM ಕೇಳ್ತಾ ಬೈಕಲ್ಲಿ ಆಫೀಸ್ ಗೆ ಹೋಗೋವಾಗ ವಿಧಾನಸೌದದ ಹತ್ರ ದಾರಿದೀಪ ಕೆಂಪಾದವೋ ಎಲ್ಲ ಕೆಂಪಾದವೋ.. ಬೈಕ್ ಆಫ್ ಮಾಡಿ ಹಾಳಾದ ಬಿಸಿಲಿಗೆ ಬೈತಾ ಇರೋವಾಗ FMನ ಹಾಡು ಕೇಳಿ ತಂಪಾದವೋ ಎಲ್ಲ ತಂಪಾದವೋ..ಕನ್ನಡದ ಸೂಪರ್ ಹಿಟ್ ಚಿತ್ರ "ಹುಚ್ಚ"ದ "ಉಸಿರೇ ಉಸಿರೇ..." ಹಾಡು ಬರ್ತಾ ಇತ್ತು. ವಾಹ್ ಎನ್ ಹಾಡು ಅದು!! ಎಷ್ಟು ಸಾರಿ ಕೇಳಿದ್ರೂ ಮತ್ತೂ ಕೇಳ್‌ಬೇಕು ಅನ್ಸುತ್ತೆ. ಪ್ರೇಮ ಕವಿ ಕೆ. ಕಲ್ಯಾಣ್ ಬರೆದ ಆ ಹಾಡನ್ನು ಗುನುಗುತ್ತಾ ಆಫೀಸ್ ಗೆ ಬರೋವಾಗ ಬಿಸಿಲಿನ ಹೊಡೆತಕ್ಕೆ ಲಿರಿಕ್ಸ್ ಚೇಂಜ್ ಆಗ್ಬಿಡೋದೆ??
ಬಿಸಿಲಿಗೆ ಸಮುದ್ರದ ನೀರೆ ಆವಿ ಆಗುತ್ತೆ, ಅರಳಿರೋ ಹೂವೇ ಬಾಡಿ ಹೋಗುತ್ತೆ ಅಂತಾದ್ರಲ್ಲಿ ಒಂದು ಹಾಡಿನ ಲಿರಿಕ್ಸ್ ಚೇಂಜ್ ಆಗೋದು ಯಾವ್ ಲೆಕ್ಕ ಹೇಳಿ..
ಕೊರೆತ ಮೊರೆತ ಎಲ್ಲದಕ್ಕೂ ಫುಲ್ಲ್ ಸ್ಟಾಪ್ ಹಾಕಿ ಹೇಳ್ತೀನಿ ಕೇಳಿ,
"ಉಸಿರೇ ಉಸಿರೇ ಈ ಉಸಿರ ಕೊಲ್ಲ ಬೇಡ.." ಈ ಹಾಡಿನ ಟ್ಯೂನ್ ಗೆ "ಬಿಸಿಲೇ ಬಿಸಿಲೇ.." ಅಂತ ಸುಡೋ ಬಿಸಿಲಿನ ಬಗ್ಗೆ ಮನಸಲ್ಲೇ ಬರ್ಕೊಂಡಿದ್ದ ಹಾಡನ್ನು ಇಲ್ಲಿ ಬ್ಲಾಗಿಸ್ತೀನಿ. ಹಾಡಿ ನೋಡಿ: ಮಜಾ ಮಾಡಿ...



ಬಿಸಿಲೇ ಬಿಸಿಲೇ ಈ ರೀತಿ ಕೊಲ್ಲ ಬೇಡ,
ಬೇಸಿಗೆ ಹೆಸರಲಿ ಸುಡು ಸುಡುತ ಗಿಲ್ಲ ಬೇಡ,
ಬೆವರಲ್ಲೇ ಬೇಯುತಿದೆ ತನುವು,
ಮಳೆಗಾಗಿ ಕಾಯುತಿದೆ ಮನವು,
ತಂಗಾಳಿಏ ಆಲಂಗಿಸು ಈ ದೇಹವಾ ತಂಪಾಗಿಸು,
ಬಾ ಒಂದೇ ಒಂದು ಸಾರಿ ನನ್ನ ಚುಂಬಿಸು..
ಬಿಸಿಲೇ ಬಿಸಿಲೇ ಈ ರೀತಿ ಕೊಲ್ಲ ಬೇಡ,...

ಬಾನಲ್ಲಿ ನಗುತ ಕೂತು ನೇಸರನು,
ಭೂಮಿಯ ನಗುವನ್ನೆಲ್ಲ ಮರೆಸಿಹನು,
ಹೇ ಬಿಸಿಲೆ ಇಲ್ಲಿ ಏನು ಕೆಲಸ ಹೇಳು,
ನೀ ಭುವಿಗೆ ಬರುವ ಮುಂಚೆ ಸ್ವಲ್ಪ ಹೇಳು..

ಭೂಮಿಗೆ ಚಪ್ಪರ ಹಾಕೋ ರೀತಿಯಲಿ,
ಬಣ್ಣದ ಕೊಡೆಯ ಹಿಡಿದೆ ಕೈಯಲ್ಲಿ..
ಕೊಡೆ ಹಿಡಿದಾ ಮರುಕ್ಷಣವೇ - ಮಾಯಾ ಆ ಬಿಸಿಲೂ,
ತಂಗಾಲಿಯೇ ಆಲಂಗಿಸು ಈ ದೇಹವಾ ತಂಪಾಗಿಸು
ಬಾ ಒಂದೇ ಒಂದು ಸಾರಿ ನನ್ನ ಚುಂಬಿಸು

ಬಿಸಿಲೇ ಬಿಸಿಲೇ ಈ ರೀತಿ ಕೊಲ್ಲ ಬೇಡ,
ಬೇಸಿಗೆ ಹೆಸರಲಿ ಸುಡು ಸುಡುತ ಗಿಲ್ಲ ಬೇಡ...

ಲಾ ಲಾ ಲ ಲಾ ಲಾ ಲ (3 ಟೈಮ್ಸ್ ರಿಪೀಟ್:-)

- ನಿಮ್ಮವ

Wednesday, March 10, 2010

ವೃಕ್ಷ ವೇದನೆ

ನಮ್ಮ ಲೈಫ್‌ನ ಅತಿ ದುಃಖದ ದಿನಗಳ ಲೆಕ್ಕ ಹಾಕಿದ್ರೆ ಅದರಲ್ಲಿ ಕಾಲೇಜ್ ನ ಕೊನೆಯ ದಿನಗಳದ್ದು ಸಿಂಹ ಪಾಲೋ ಹುಲಿ ಪಾಲೋ ಇಲಿ ಪಾಲೋ ಇರತ್ತೆ. ಮೂರ್ನಾಲ್ಕು ವರ್ಷ ಜೊತೆಗಿದ್ದ ಗೆಳೆಯರನ್ನ ಬಿಟ್ಟು ಹೋಗೋದು ಅಂದ್ರೆ ತಮಾಷೆನಾ?? ಜೊತೆ ಜೊತೆಗೆ ಆಟ ಊಟ ಓಡಾಟ ಮಾಡುತ್ತಾ ಟೈಮ್ ಸಿಕ್ಕಾಗ ಪಾಟನೂ ಕೇಳುತ್ತಿದ್ದ ದಿನಗಳು ಮುಗಿಯುತ್ತಾ ಬಂದಾಗ ಆಗೋ ಸಂಕಟ ಇದೆಯಲ್ಲಾ ಅದನ್ನಾ ಹೇಳೋದೂ ಕಷ್ಟ, ತಾಳೋದು ಇನ್ನೂ ಕಷ್ಟ. ಏನೂ ಬೇಡ ಅನಿಸೋ ಅಂತ ದಿನಗಳಲ್ಲೂ ಒಂದು ಬುಕ್ ಮಾತ್ರ ಬಿಡಲಾರದ ಬ೦ಟನಂತೆ ಯಾವಾಗಲೂ ನಮ್ ಜೊತೆಗೇ ಇರತ್ತೆ. ಅದೇ ಸ್ಲ್ಯಾಮ್ ಬುಕ್ ಅಂತಾರಲ್ಲಾ. ನಮ್ಮ ಮೆಮೋರೀ ಮೇಲೆ ನಮಗೇ ಡೌಟ್ ಇರೋದ್ರಿಂದಲೋ ಇಲ್ಲಾ ಮುಂದೋಂದ್ ದಿನ ಹಳೆ ನೆನಪುಗಳನ್ನ ಮೇಲಕು ಹಾಕೋ ಆಸೆಯಿಂದಲೋ ಏನೋ, ಗೆಳೆಯರಿಂದ ತಮ್ಮ ಕಾಲೇಜು ದಿನಗಳ ನೆನಪುಗಳನ್ನ ಆ ಸ್ಲ್ಯಾಮ್ 'ಪುಸ್ತಕದಲ್ಲಿ' 'ಪಟ್ಟಿ' ಮಾಡಿಸಿಕೊಳ್ತಾರೆ.

ನಂದೂ ಒಂದು ಬುಕ್ ಇತ್ತು, ಈಗಲೂ ಇದೆ. ಮಾರ್ಕ್ಸ್ ಕಾರ್ಡು ಪಾಸ್‌ಪೋರ್ಟ್ ಕಾದಿಟ್ಟುಕೊಂಡ ಹಾಗೆ ಭದ್ರವಾಗಿ ಇಟ್ತ್ಕೊಂಡಿದೀನಿ. ಅದರಲ್ಲಿರೋ ಒಂದು (ವಿಚಿತ್ರ) ಪ್ರಶ್ನೆಗೆ ನನ್ನ ಮಿತ್ರ ಅಕ್ಷಯ್ ನದು ಸಚಿತ್ರ ಉತ್ರ ಇದೆ.
"ನನ್ನೊಂದಿಗಿನ ನಿನ್ನ ಸವಿನೆನಪುಗಳು",
ಎರಡು ಮರಗಳಿರೋ ಒಂದು ಸುಂದರವಾದ ಫೋಟೋ ಹಚ್ಚಿ
ಅನಾಮತ್ ಎರಡು ಪೇಜ್ ಪೂರ್ತಿ ಬರೆದಿದ್ದಾನೆ. ಆ ಮರಗಳನ್ನ ನಮ್ಮಿಬ್ಬರಿಗೆ ಹೋಲಿಸಿ ಅದ್ಬುತವಾಗಿ ನೆನಪುಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾನೆ.
ನಾವಿಬ್ಬರೂ ವಾದ someವಾದ ಮಾಡೋದು ಸ್ವಲ್ಪ ಜಾಸ್ತಿನೇ. ಯಾ
ವುದೇ ವಿಷಯಕ್ಕಾದರೂ ಅರ್ಥವಿರುವ(ದ) ಚರ್ಚೆ ಮಾಡ್ತೀವಿ. ನಮ್ಮ ಗೆಳೆತನ ಮತ್ತವನ ಬಗ್ಗೆ ಇನ್ನೊಮ್ಮೆ ಹೇಳ್ತೀನಿ, ಈಗ ಪೀಟಿಕೆಯ ಮೂಲಕ್ಕೆ ಬರೋಣ. ಏನೋ ಮಾತಡುವಾಗ ಆ ಫೋಟೋದ ವಿಷಯ ಬರಲು ಅವ್ನು ನನಗೆ ಅದರ ಮೇಲೆ ತಾನು ಬರೆದ ರೀತಿ, ದಾಟಿ, ಕಲ್ಪನೆ ಬಿಟ್ಟು ಬೇರೇನನ್ನಾದರೂ ಬರೆಯಲು ಹೇಳಿದ. "ಏನು ಬರೆಯೋದು??" ಯೋಚನೆಗೆ ಬಿದ್ದೆ. ಅವನು ಬರೆದಷ್ಟು ಚೆನ್ನಾಗಲ್ಲದಿದ್ದರೂ ಏನಾದರೂ ಡಿಫರೆಂಟ್ ಆಗಿ ಬರೆಯೋ ಯೋಚನೆಯಲ್ಲಿರುವಾಗ ಮೂಡಿ ಬಂದಿದ್ದೇ ಈ ಕವಿತೆ...




ಹುಚ್ಚು ಮನುಜನ, ತುಚ್ಛ ಆಸೆಗೆ ಬಲಿಯಾದೆವು ನಾವು
ತನ್ನ ಮನಸಿನ, ಸಣ್ಣ ಕನಸಿಗೂ ಕೊಡುತಿಹನವನು ನೋವು;
ಇದು ಒಂದು ಬದುಕೇ?
ಕೊನೆ ಎಂದು ಇದಕೆ?
ದಯಮಾಡಿ ಹೇಳುವಿರಾ ನೀವು....

ಹಚ್ಚ ಹಸಿರನು, ಬೆಚ್ಚಗೆ ಹೊದ್ದಿಹ ಭೂಮಿಯೇ ಕೇಳೆಯಾ
ಬಣ್ಣದ ಬಾನಲಿ, ತಣ್ಣನೆ ಕುಳಿತಿಹ ಸೂರ್ಯನೇ ಕಾಣೆಯಾ
ಈ ನಮ್ಮ ವ್ಯಥೆಯಾ
ಕೊರಗಿನಾ ಕಥೆಯಾ
ದಯಮಾಡಿ ಕೊಡಿಸೆರಾ ಮುಕುತಿಯಾ....

ವಡ್ದ ಹಟದಲಿ, ಸೆಡ್ಡು ಹೊಡೆದರೆ ಸುಮ್ಮನಿರುವುದೇ ಪರಿಸರ
ಜಾಸ್ತಿ ಕೆಣಕಲು, ಶಾಸ್ತಿ ಮಾಡ್ವುದು ಸಾಕು ನಿಲ್ಲಿಸು ಓ ನರ
ವೃಕ್ಷಗಳ ಉಳಿಸು
ಸಸ್ಯಗಳ ಬೆಳೆಸು
ನಿನ್ನ ಬಾಳಾಗುವುದು ಬಂಗಾರ....

-ನಿಮ್ಮವ

Thursday, March 4, 2010

ನೋ ಸ್ಮೋಕಿಂಗ್...!



ಎಲ್ಲೆಂದ್ರಲ್ಲಿ
ಮಾಡ್ಬಾರ್ದಂತೆ
ಧೂಮಪಾನ:
ಮಾಡಿದ್ರೂನೂ
ಕಾಣ್ದಾ೦ ಗಿರ್ಲಿ
ಜೋಪಾನ....

[ಸಾರ್ವಜನಿಕ ಜಾಗಗಳಲ್ಲಿ ಧೂಮಪಾನ ನಿಷೇಧಿಸಿದಾಗ ಬರೆದದ್ದು]

ಬರೆಯದೇ ಬೋರಾಗಿದೆ..!!



ಇಷ್ಟು ದಿನ ನನಗೆ ಟೈಮೇ ಇರ್ಲಿಲ್ವಾ?
ಇಲ್ಲಾ
ಬರೆಯೋಕೆ ಏನೂ ಇರ್ಲಿಲ್ವಾ??

ಕಾರಣ ಇದಾವುದೂ ಅಲ್ಲಾ. ಆದ್ರೂ ಏನೂ ಬ್ಲಾಗಿಸಿರಲಿಲ್ಲಾ. ಏನೂ ಬರೆಯದೇ ತುಂಬಾ ಬೋರಾಗಿದೆ. ಮನಸ್ಸಿನ ಮೂಲೆಯಲ್ಲಿಏನೋ ಚಡಪಡಿಕೆ, ಬರೆಯೋ ಕನವರಿಕೆ. ಕನವರಿಕೆಯ ನಿವಾರಿಕೆಗೆ ಏನಾದರೂ ಬ್ಲಾಗಿಸೋ ಗಟ್ಟಿ ಮನಸ್ಸು ಮಾಡಿ, ಆಲಸಿತನವನ್ನೆಲ್ಲಾ ಗಂಟು ಕಟ್ಟಿ ಮೆಲಿಟ್ಟು ಕೀಲಿ ಮಣೆ ಕುಟ್ತಾ ಇದೀನಿ. ನಾನು ಕುಟ್ಟೋ ಕಟ್ ಕಟ್ ಶಬ್ದದಲ್ಲಿ ಪೆಟ್ಟು ತಿನ್ತಿರೋಬಡಪಾಯಿ ಬಟನ್ ಕೂಗು ಮುಚ್ಚಿ ಹೋಗಿದೆಯೇನೋ. ಆದರೂ ಇದಾವುದೂ ನನ್ನ ಹುರುಪು ಹುಮ್ಮಸ್ಸಿಗೆ ತಡೆಯೊಡ್ಡುತಿಲ್ಲ. ಈಗನನಗಿರುವುದು ಒಂದೇ ಗುರಿ; ಏನಾದರೂ ಬರಿ...

ತನ್ನ ಮೇಲೆ ತಾನೇ ಮುನಿಸಿಕೊಂಡಂತೆ ಮುದುಡಿ ಕುಳಿತಿರೋ ಮನಸ್ಸನ್ನ ಪೂಸಿ ಹೊಡೆದು ಹೊಸ ಹುಮ್ಮಸ್ಸು ತುಂಬಲುಏನಾದ್ರೂ ಗೀಚ್ತಿರ್ತೀನಿ. ಅವನ್ನೆಲ್ಲಾ ಬ್ಲಾಗಿಸಬೇಕೆಂಬ ದಾವಂತ. ಏಕೆಂದರೆ " ಹೇಳುವುದು ತುಂಬಾ ಉಳಿದು ಹೋಗಿದೆ, ಹೇಳಲಿಹೇಗೆ ತಿಳಿಯದಾಗಿದೆ ..". ಹಳೆ ಡೈರಿ ತೆಗೆದು ಇಷ್ಟು ದಿನ ಬರೆದಿಟ್ಟ ಕೆಲವು ಚುಟುಕು, ಕವನ, ಹಾಡುಗಳನ್ನು ಬ್ಲಾಗಿಸುತ್ತೇನೆ. ಇವಿಷ್ಟನ್ನೂ ಹೇಳೋವಾಗ ಏನೋ ಅನಿಸ್ತಾ ಇದೆ ಗೊತ್ತಾ?? ಮನಸ್ಸು, ಅದರ ವಿಚಾರ, ಯೋಚನೆ, ಚಿಂತೆ, ಎಷ್ಟು ವಿಚಿತ್ರಅಲ್ವಾ? ಏನೋ ಮಾಡ್ತಿರ್ತೀವಿ ಆದ್ರೆ ಮನ್ಸು ಎಲ್ಲೋ ಇರತ್ತೆ. ಏನೇನೋ ಯೋಚ್ನೆಗಳು ಬೇರೆ. ಮನ್ಸು ಹೀಗೆ ಇರ್ಬೇಕುಇವುಗಳನ್ನಷ್ಟೇ ಯೋಚಿಸ್ಬೇಕು ಅಂತಾ control ಮಾಡಕಾಗತ್ತಾ ಇಲ್ಲಾ ರೂಲ್ಸೋ Law ನೋ ಮಾಡಿ ಫಾಲೋ ಮಾಡಕಾಗತ್ತಾಇಲ್ಲ ಅಲ್ವಾ?? ಈಗ್ಲೇ ನೋಡಿ ಏನೋ ಹೇಳ್ತಾ ಇದ್ದೆ, ಎಲ್ಲೋ ಬಂದಿದೀನಿ...

ಚಿತ್ತದ ಚಿಂತೆಯ ನಿಯಂತ್ರಿಸಲು
ಸಾಧ್ಯವಾಗದು ಯಾವ LAW ಗೂ;
ಚಿಂತೆಯೇ ಇಲ್ಲದಂತೆ ಚಿತ್ತವನ್ನಿರಿಸಲು
ಸಾಧ್ಯವಾಗಿಸೋದು ಈ ಬ್ಲಾಗು..
-ನಿಮ್ಮವ

Sunday, September 6, 2009

ಒಂದು ಹಾಡು(?)

ಯಾಹ್ಹೂ!!ಹದಿಮೂರು ದಿನಗಳ ಬಿಡುವಿಲ್ಲದ ಕೆಲಸದ ನಂತರ ಇಂದು ಮನೆಯಲ್ಲೇ ಉಳಿಯುವ ಸದಾವಕಾಶ ನನ್ನದಾಗಿದೆ. ಏನಪ್ಪಾ ಅಂತಾ ಘನಂದಾರಿ ಕೆಲ್ಸಾ ಇಷ್ಟು ದಿನ ಅಂದ್ರೆ .....ಏನು ಇಲ್ಲಾ.!! ಸಿಂಪಲ್ಲಾಗಿ ಹೇಳ್ಬೇಕಂದ್ರೆ ಸಾಫ್ಟ್ವೇರಿಗಳ ಲೈಫು. ದತ್ತ ಕಾರ್ಯ(project) ಇದ್ದಾಗ ಹೊತ್ತು ಗೊತ್ತು ಇಲ್ದೇ ಕತ್ತೆ ಥರಾ ದುಡೀಬೇಕಾಗತ್ತೆ ನೋಡಿ, ಆಗ ವೀಕ್ ಡೇ ವೀಕ್ ಎಂಡ್ ಅಂತ ಲೆಕ್ಕಾನೇ ಇರಲ್ಲಾ. ಅಂಥಾ ತಾಂತ್ರಿಕ ಜೀವನದ ಯಾಂತ್ರಿಕ ದಿನಚರಿಯಲ್ಲಿ ಕಳೆದೋಗಿದ್ದ ನನಗೆ ಈದಿನ ಏನೋ ಹೊಸ ಹುಮ್ಮಸ್ಸು ನೀಡಿದೆ. ನನ್ನಂತ ಸ್ವಘೋಷಿತ ಕವಿಗಳಿಗೆ ತೋಚಿದ್ದು ಗೀಚಲು ಮತ್ತೇನೂ ಸ್ಪೂರ್ತಿ ಬೇಕು ? ಆ ಹುಮ್ಮಸ್ಸಿನಲ್ಲಿಯೇ ಬರೆಯಲು ಕೂತಿರುವೆ. ಕವಿ ಅನ್ನಿಸಿಕೊಂಡವರೆಲ್ಲರೂ ಬರೆದಿರುವ ಹೆಣ್ಣಿನ ಬಗ್ಗೆಯೇ ಬರೆದು ನನಗೆ ನಾನೇ ಕವಿಯೆಂದುಕೊಂಡು ಖುಷಿಪಡುವ ಹುಚ್ಚು ತೆವಲಿಗಾಗಿ ಈ ಸಿನಿಮಾ ಶೈಲಿಯ ಹಾಡು.
(ಭಾವಾರ್ಥಕ್ಕೆ ಹೊಂದುವ ಭಾವಚಿತ್ರ)

ನಗುತಿರುವ ನೀರೆ, ಓ ಮಿನುಗು ತಾರೆ
ನನ್ನೆದೆಯ ಜಗವನ್ನು ಬೆಳಗು ನೀ ಬಾ ಬಾರೆ....

ನಿನ್ನ ಹೊಳೆವ ಕಂಗಳಾ
ಬೆಳಕೆ ಬೆಳದಿಂಗಳಾ
ನನ್ನ ಸೆಳೆವ ಪ್ರೀತಿಗೆ
ಈ ಮನಸೇ ಅರಳೋ ಅಂಗಳಾ...

ನಗುತಿರುವ ನೀರೆ...........

ದುಂಡು ಗೆಂಪು ಕೆನ್ನೆಯಾ
ಗುಳಿಯೇ ಅಂದ ನಿನ್ನಯಾ
ಕಂಡು ಎದೆಯು ಹಾಡಿದೆ
ಆ ಬಿರಿದ ತುಟಿಯ ಸನ್ನೆಯಾ...

ನಗುತಿರುವ ನೀರೆ, ಓ ಮಿನುಗು ತಾರೆ
ನನ್ನೆದೆಯ ಜಗವನ್ನು ಬೆಳಗು ನೀ ಬಾ ಬಾರೆ....

- ನಿಮ್ಮವ

Tuesday, June 9, 2009

ಹುಡುಗ್ರಾಟ - ಗ್ರೇಟ್ ಎಸ್ಕೇಪ್..!!

ಗ್ರೇಟ್ ಎಸ್ಕೇಪ್..!!

ಒಂದರಿಂದ 5ನೇ ತರಗತಿಯವರೆಗೆ ನಾನು ಕಲಿತಿದ್ದು ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ. ನಂತರ 6ನೇ ತರಗತಿಯಿಂದ ನನ್ನನ್ನು ವಸತಿ ಶಾಲೆಗೆ ಸೇರಿಸಿದ್ದರು. ಜವಾಹಾರ ನವೋದಯ ವಿದ್ಯಾಲಯ,ಶಾಲೆಯ ಹೆಸರು. ನನ್ನ ಅಕ್ಕ ಕಲಿತಿದ್ದು ಕೂಡ ಅಲ್ಲೇ. ನಾನು ಆ ಶಾಲೆಗೆ ಸೇರಿದಾಗ ನನ್ನ ಅಕ್ಕ 10ನೇ ಇಯತ್ತೆ. ಈ ಕಥೆಗೆ ಇಷ್ಟು ಡೀಟೇಲ್ಸ್ ಸಾಕು. ಮತ್ತೂ ಬೇಕಾದರೆ ಬೇಕಾದಾಗ ಹೇಳುವೆ.

* * *

ಶಿಸ್ತು ನಮ್ಮ ಮನೆಯ ಪರಿಸರದ ಒಂದು ಭಾಗವಾಗಿದ್ದರೂ ನನಗೆ ಅತಿಯಾದ ರಿಸ್ಟ್ರಿಕ್ಶನ್ಸ್ ಇರಲಿಲ್ಲ. ಆದ್ದರಿಂದ ನನ್ನ ಬಾಲ್ಯ ಸ್ವತಂತ್ರ ಹಕ್ಕಿಯಂತಿತ್ತು. ಬೇಕೆನಿಸಿದಾಗ ಹಾರುವುದು , ಬೇಡೆನಿಸಿದಾಗ ಕೂರುವುದು. ಯಾವುದಕ್ಕೂ ಅತಿಯಾದ ಅಡೆ ತಡೆಗಳಿರುತ್ತಿರಲಿಲ್ಲ.

ಹೀಗಿದ್ದ ಹಕ್ಕಿಯೊಂದನ್ನು ತಂದು ಪಂಜರದಲ್ಲಿಟ್ಟರೆ ಹೇಗಾಬೇಡ??
ವಸತಿ ಶಾಲೆಯ ಹೊಸತರಲ್ಲಿ ನನಗನಿಸಿದ್ದು ಕೂಡ ಹಾಗೆ. ಅಷ್ಟು ಚಿಕ್ಕ ವಯಸ್ಸಿಗೆ ಅಷ್ಟೊಂದು ರೂಲ್ಸ್ಗಳು ಮನಸ್ಸಿಗೆ ಒಗ್ಗಿರಲಿಲ್ಲ. ಶಾಲೆಯೇ ಜೈಲಿನಂತನಿಸತೊಡಗಿತ್ತು. ಯಾರೂ ಓಡಿ ಹೋಗಬಾರದೆಂದು ಕಟ್ಟಿದ್ದ ಕಾಂಪೌಂಡ್ ಗೋಡೆಯು ಅಣುಕಿಸಿ ಛಾಲೆಂಜ್ ಮಾಡುತ್ತಿದ್ದಂತಿತ್ತು. ಯಾವತ್ತಾದರೂ ಆ ಗೋಡೆಯನ್ನು ಹಾರಿ ಹೋಗಬೇಕೆನ್ನುವ ಆಸೆ ಆದಾಗಲೇ ಮನಸ್ಸಿನ ಕೋಣೆಯಲ್ಲಿ ಗಟ್ಟಿಯಾಗಿಹೋಗಿತ್ತು.

* * *

ನವೋದಯದಲ್ಲಿ ನನಗೆ ಮೊದಲು ಜೊತೆಯಾದ ಗೆಳೆಯರೆಂದರೆ ಗೋಪಿ ಮತ್ತು ಕೆಂಚ (ಅವರ ನಿಜ ನಾಮಧೇಯ ಇದಲ್ಲದಿದ್ದರೂ ಅವರಿಗೆ ನೇರವಾಗಿ ಸಂಬಂಧವಿರುವ ಹೆಸರುಗಳಿವು). ನಮ್ಮದು ಒಂದೇ ರೂಮು ಕೂಡಾ. ಸಮಾನ ವಯಸ್ಕರಾಗಿದ್ದು ಒಂದೇ ತೆರನಾದ ಪರಿಸರದಲ್ಲಿದ್ದುದರಿಂದ ಸಮಾನ ಮನಸ್ಕರೂ ಆಗಿದ್ದೆವು. ಇದೆ ಸರಿಯಾದ ಸಮಯವೆಂದು ತಿಳಿದು ಮನಸ್ಸಿನಲ್ಲಿದ್ದ ಆಸೆಯು ತಾನೂ ಎದ್ದು ನಿಂತಿತ್ತು. ಮೂವರ ಆಸೆಯೂ ಒಂದೇ ಆದಾಗ ಸುಮ್ಮನಿರುವುದಾದರೂ ಹೇಗೆ?? ಒಂದು ಶನಿವಾರ ಹೊರಗೋಡಿ ಹೋಗುವ ಪ್ಲ್ಯಾನಿನ ನೀಲನಕ್ಷೆ ತಯಾರಾಗಿ ಮರುದಿನವೇ ಹೋಗುವುದೆಂದು ಫೈನಲ್ ಆಯಿತು. ಆದರೆ ಹೋಗುವುದಾದರೂ ಎಲ್ಲಿಗೆ???

"ದಾಮೋದರ ಸ್ಟೋರ್ಸ್" ಅಂದ ಕೆಂಚ. ಅಲ್ಲಿಗ್ಯಾಕೆ??, ಎಂದೆ ನಾನು. "ಅಲ್ಲಿಂದ ನಮ್ಮ ಸೀನಿಯರ್ ಒಬ್ಬ ಬಹಳಷ್ಟು ಕ್ರಿಕೆಟರ್ಸ್ ಕಾರ್ಡ್ ತಂದಿದ್ದಾನೆ". "ಒಃಹ್ ಹೌದಾ ನಾವು ತರೋಣ" ಕೆಂಚನ ಮಾತನ್ನು ತುಂಡರಿಸಿ ಹೇಳಿದ್ದ ಗೋಪಿ. ಹೀಗೆ ಒಂದು ಗುರಿಯೊಂದಿಗೆ ನಮ್ಮ ಪ್ಲ್ಯಾನ್ ರೆಡಿ ಆಗಿತ್ತು.

ಮರುದಿನ ಅಂದರೆ ಭಾನುವಾರದಂದು ಎಲ್ಲರೂ ಮಲಗಿದ್ದಾಗ ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಅಷ್ಟೇನೂ ಎತ್ತರವಿಲ್ಲದ ಕಡೆ ಕಾಂಪೌಂಡ್ ಜಿಗಿದು, ಬಹುದಿನದ ಕನಸನ್ನು ನನಸಾಗಿಸಿಕೊಂಡಿದ್ದೆವು. ಆದರೆ ಯಾವುದೋ ಮಾಯದಲ್ಲಿ ಅದನ್ನು ನಮ್ಮ ಪ್ರಿನ್ಸಿ ನೋಡಿದ್ದರು. ಹಾರಿ ಹೊರಗೋಡಿದ ಮೂವರ ಹುಡುಕಾಟಶಾಲೆಯಲ್ಲಿ ಆಗಲೇ ಶುರುವಾಗಿತ್ತು. ಇದಾವುದರ ಪರಿವೆ ಇಲ್ಲದಂತೆ ನಾವು ಕುಮಟಾ ಪೇಟೆಯ ಗಲ್ಲಿ ಗಲ್ಲಿ ಸುತ್ತುತ್ತಿದ್ದೆವು. ಒಳಗೊಳಗೆ ಹೆದರುತ್ತಿದ್ದರೂ ಮತ್ತೊಬ್ಬರಿಗೆ ತೋರಿಸದೇ ಎದೆ ಉಬ್ಬಿಸಿ ನಡೆಯುತ್ತಾ ಪ್ರತಿ ಕ್ಷಣವನ್ನೂ ಅನುಭವಿಸುತ್ತಿದ್ದೆವು. ಮೂವರಲ್ಲಿ ನಾನೇ ಸ್ವಲ್ಪ ಹೆದರುಪುಕ್ಕಲು. ಅದರಲ್ಲೂ ಶಾಲೆಯಲ್ಲಿರುವ ಅಕ್ಕನಿಗೆ ನಾನು ಓಡಿ ಹೋದದ್ದು ತಿಳಿದರೆ ಅನ್ನೋ ಭಯ ಬೇರೆ. ಆದರೂ ಅಳುಕನ್ನು ತೋರಿಸದೇ ಏನೋ ಸಾಧಿಸಿದ ಪುಳಕದೊಂದಿಗೆ ದಾಮೋದರ್ ಸ್ಟೋರ್ಸ್ ಮುಟ್ಟಿದೆವು. ನಾವು ಹೋಗುವುದನ್ನು ತಿಳಿದು ಕೆಲವು ಗೆಳೆಯರು ಅವರಿಗಾಗಿ ತರಲೆಂದುಉದ್ದನೆಯ ಚೀಟಿ ಕೊಟ್ಟಿದ್ದರು. ನಾವು ಹೋಗಿದ್ದನ್ನು ಯಾರಿಗೂ ತಿಳಿಸಬಾರದು ಮತ್ತು ಯಾರಾದರೂ ಕೇಳಿದರೆ ಹೇಗಾದರೂ ಪಾರು ಮಾಡಬೇಕೆಂಬ ಡೀಲ್ ನೊಂದಿಗೆ ಅವರ ಡಿಮಾಂಡನ್ನು ಒಪ್ಪಿದ್ದೆವು. ಭರದಿಂದ ಖರೀದಿ ಮುಗಿಸಿ ಬೇಗನೆ ಶಾಲೆಗೆ ಹಿಂದಿರುಗುವ ಯೋಚನೆಯಿಂದ ಸರ ಸರನೆ ಹೆಜ್ಜೆ ಹಾಕಿದ್ದೆವು.

* * *

ಇಷ್ಟೆಲ್ಲಾ ನಡೆಯುವಾಗ ಮತ್ತೊಂದು ಆವಾಂತರವಾಗಿ ಹೋಗಿತ್ತು. ನಾಗರಾಜ(ನಮಗಿಂತ 2 ವರ್ಷ ಸೀನಿಯರ್)ನ ಪೇರೆಂಟ್ಸ್ ಅವನನ್ನು ಭೇಟಿಯಾಗಲು ಶಾಲೆಗೆ ಬಂದಿದ್ದರು. ಪ್ರಿನ್ಸಿ ಅವನಿಗಾಗಿ ಹೇಳಿ ಕಳಿಸಿದರು. ಒಂದು ತಾಸಾಯ್ತು,ಎರಡು ತಾಸಾಯ್ತು ಎಷ್ಟು ಹೊತ್ತು ಆದರೂ ಅವನ ಪತ್ತೆಯೇ ಇಲ್ಲದಾಗಿತ್ತು. ಅಲ್ಲಿಗೆ ಪ್ರಿನ್ಸಿಗೆ ಖಾತರಿಯಾಗಿತ್ತು , ಓಡಿ ಹೋದವರಲ್ಲಿ ಇವನೂ ಒಬ್ಬ.

ಇಷ್ಟೆಲ್ಲಾ ನಡೆದರೂ ನಮಗೇನೂ ಗೊತ್ತೇ ಇರಲಿಲ್ಲ. ಬರುವ ದಾರಿಯಲ್ಲಿ ನಮಗೆ ನಾಗರಾಜನ ದರ್ಶನವಾಯಿತು. ನಮ್ಮ ಸಾಧನೆಯನ್ನು ಬಿಂಬಿಸುವಂತೆ ಅವನೆಡೆಗೆ ನೋಟ ಬೀರಿ , ಶಾಲೆಯ ಒಳ ಸೇರಿಕೊಳ್ಳಲು ದೌಡಾಯಿಸಿದೆವು. ಏನೂ ತೊಂದರೆ ಇಲ್ಲದೇ ನಮ್ಮ ಮೊದಲ ಪ್ರಯತ್ನದಲ್ಲಿ ಯಶ ಕಂಡಿದ್ದನ್ನು ನಮ್ಮಲ್ಲೇ ಹೇಳಿಕೊಂಡು ಸಂತೋಷಪಟ್ಟೆವು.ನಮಗೆ ನಾಳೆ ನಡೆಯಲಿದ್ದ ಮಂಗಳಾರತಿಯ ಬಗ್ಗೆ ಗೊತ್ತೇ ಇರಲಿಲ್ಲ !!

* * *

ಸೋಮವಾರ ಬೆಳಿಗ್ಗೆ, ಶಾಲೆಯ ಪ್ರಾರ್ಥನೆಯ ಸಮಯ.

ಕೆಂಚ ಮತ್ತು ಗೋಪಿಗೆ ಪ್ರಿನ್ಸಿಯಿಂದ ಬುಲಾವ್ ಬಂದಿತ್ತು. ನನಗೆ ಬಂದಿರದಿದ್ದರೂ ನಾನು ಹೆದರಿ ಬೆವರಿ ತೊಯ್ದು ತೊಪ್ಪೆಯಾಗಿ ಹೋಗಿದ್ದೆ. ಅವರನ್ನು ಕರೆದದ್ದು ಓಡಿ ಹೋಗಿದ್ದಕ್ಕೆ ಎಂದು ನನಗೆ ಖಾತ್ರಿಯಾಗಿತ್ತು. ಅಲ್ಲೇ ಚೆಂಬರ್ ಸುತ್ತ ಮುತ್ತ ತಿರುಗುತ್ತಾ ಅಲ್ಲೇನು ನಡೆಯುತ್ತಿದೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೆ. ಅಷ್ಟರಲ್ಲಿ ಪ್ರಾರ್ಥನೆಯ ಘಂಟೆ ಹೊಡೆಯಿತು, ಎಲ್ಲರೂ ಸಾಲಿನಲ್ಲಿ ಬಂದು ನಿಂತಿದ್ದೂ ಆಯಿತು. ಅಷ್ಟಾದರೂ ಕೆಂಚ ಮತ್ತು ಗೋಪಿ ಬಂದಿರಲಿಲ್ಲ. ಪ್ರಾರ್ಥನೆ ಶುರುವಾಯಿತು. ಆಗಲೂ ನಾನು ಮಾತ್ರ ಅವರಿಬ್ಬರಿಗಾಗಿ ನಿಂತಲ್ಲೇ ಹುಡುಕುತ್ತಿದ್ದೆ.

ಪ್ರಾರ್ಥನೆಯ ಕಡೆಯಲ್ಲಿ ಪ್ರಿನ್ಸಿ ಮೈಕ್ ಬಳಿ ಬಂದು ಮೂರು ಹುಡುಗರು ನಿನ್ನೆ ಓಡಿ ಹೋದ ಕಥೆ ಹೇಳತೊಡಗಿದರು. ಯಾರವರು ಯಾರವರು ಎಂದು ಆಗಲೇ ಗುಸು ಗುಸು ಶುರುವಾಗಿತ್ತು. ನಿಂತಲ್ಲೇ ನನಗೆ ನನ್ನ ಎದೆ ಬಡಿತ ಕೇಳಿದ ಅನುಭವ. ಕ್ಲಾಸಿನಲ್ಲಿ ಬೈದರೇ ನಾಚಿಕೆ ಅಂದು ಕೊಳ್ಳುತ್ತಿದ್ದ ನನ್ನಂತವರಿಗೆ ಎಲ್ಲರ ಮುಂದೆ ಬೈದರೆ ಹೇಗಾಗಬೇಡ? ಕೊನೆಯಲ್ಲಿ ಪ್ರಿನ್ಸಿ ಅವರ ಹೆಸರುಗಳನ್ನು ಹೇಳತೊಡಗಿದರು.

" ಕೆಂಚ" ........"ಗೋಪಿ"......ಮೂರನೇ ಹೆಸರು ನನ್ನದೇ ಎಂದು ಕಣ್ಣು ಗಟ್ಟಿಯಾಗಿ ಮುಚ್ಚಿಕೊಂಡಿದ್ದೆ. "ನಾಗರಾಜ" ಅಂತು..... ಪ್ರಿನ್ಸಿ ಧ್ವನಿ....ಅಲ್ಲಿಗೆ ಮೂರೂ ಹೆಸರುಗಳೂ ಮುಗಿದಿದ್ದವು. ನನ್ನ ಹೆಸರೇ ಇಲ್ಲದ್ದರಿಂದ ನಾನು ಆಶ್ಚರ್ಯಗೊಂಡೆ. (ಒಳಗೊಳಗೆ ಕುಣಿದಾಡಿದೆ ಎಂದು ಬೇರೆ ಹೇಳಬೇಕಿಲ್ಲ ಅಲ್ವಾ?) ಮೂವರೂ ಸ್ಟೇಜಿಗೆ ಬಂದು ಎಲ್ಲರ ಮುಂದೆ ತಪ್ಪೊಪ್ಪಿಗೆ ಪತ್ರ ಓದಿದ್ದೂ ಆಯ್ತೂ ಅದಕ್ಕೆ ಹಿಮ್ಮೇಳ ನೀಡುವಂತೆ ಎಲ್ಲರೂ ನಕ್ಕಿದ್ದೂ ಆಯ್ತು. ಇಷ್ಟಾದರೂ ನನ್ನನ್ನು ಕಾಡುತ್ತಿದ್ದ ಪ್ರಶ್ನೆ ಒಂದೇ,

ನನ್ನ ಹೆಸರು ಇರಲಿಲ್ಲಾ ಯಾಕೆ ???

* * *

ಆಮೇಲೆ ತಿಳಿದ ಸಂಗತಿ ಏನೆಂದರೆ, ಪ್ರಿನ್ಸಿ ನಾಗರಾಜನನ್ನು ಬೆಳಿಗ್ಗೆನೆ ಕರೆದು ಬೆದರಿಸಿ ವಿಚಾರಿಸಿದ್ದರು. ನಿನ್ ಜೊತೆ ಇದ್ದ ಮತ್ತೆ ಇಬ್ಬರು ಯಾರು???

"ನಾನು ಒಬ್ಬನೇ ಹೋಗಿದ್ದೆ" ಸಾರ್.

..ಛಾಟ್...!!!

ಮತ್ತೆ ಪ್ರಿನ್ಸಿ, "ನಿನ್ ಜೊತೆ ಇದ್ದ ಮತ್ತೆ ಇಬ್ಬರು ಯಾರು??? "........

"ನಾನು ಒಬ್ಬನೇ ಹೋಗಿದ್ದೆ" ಅಂತ ಅವನು (ಸತ್ಯ) ಹೇಳಿದಷ್ಟೂ ಬಾರಿ ಒಂದೊಂದು ಹೊಡೆತ ಬೀಳುತ್ತಿತ್ತು. ಹೊಡೆತಕ್ಕೆ ಹೆದರಿ ಪಾಪ ಬಡಪಾಯಿ ಇಬ್ಬರ ಹೆಸರು ಹೇಳಿಬಿಟ್ಟಿದ್ದ. ಕೆಂಚ ಮತ್ತು ಗೋಪಿ. ಆಗ ಅವನಿಗೆ ಮೊದಲು ನೆನಪಿಗೆ ಬಂದ ಹೆಸರುಗಳು ಅವು. ಹೀಗೆ ಓಡಿ ಹೋದವರ ಲಿಸ್ಟ್‌ ನಿಂದ ನನ್ನ ಹೆಸರು ಕಾಣೆಯಾಗಿತ್ತು. ಅಷ್ಟಾದರೂ ಅವರಿಬ್ಬರು ಪ್ರಿನ್ಸಿ ಮುಂದೆ ನನ್ನ ಹೆಸರು ಹೇಳಿರಲಿಲ್ಲ.

6ನೇ ಕ್ಲಾಸಿನಲ್ಲೇ ಎಷ್ಟು ತಿಳುವಳಿಕೆ ಅಲ್ವಾ ಅವರಿಗೆ??

ಥ್ಯಾಂಕ್ಸ್ ಕಣ್ರೋ....

isn't it a ಗ್ರೇಟ್ ಎಸ್ಕೇಪ್ ??

ನಿಮ್ಮವ,

ಹರಟೆ ಮಲ್ಲ