ಗ್ರೇಟ್ ಎಸ್ಕೇಪ್..!!
ಒಂದರಿಂದ 5ನೇ ತರಗತಿಯವರೆಗೆ ನಾನು ಕಲಿತಿದ್ದು ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ. ನಂತರ 6ನೇ ತರಗತಿಯಿಂದ ನನ್ನನ್ನು ವಸತಿ ಶಾಲೆಗೆ ಸೇರಿಸಿದ್ದರು. ಜವಾಹಾರ ನವೋದಯ ವಿದ್ಯಾಲಯ,ಶಾಲೆಯ ಹೆಸರು. ನನ್ನ ಅಕ್ಕ ಕಲಿತಿದ್ದು ಕೂಡ ಅಲ್ಲೇ. ನಾನು ಆ ಶಾಲೆಗೆ ಸೇರಿದಾಗ ನನ್ನ ಅಕ್ಕ 10ನೇ ಇಯತ್ತೆ. ಈ ಕಥೆಗೆ ಇಷ್ಟು ಡೀಟೇಲ್ಸ್ ಸಾಕು. ಮತ್ತೂ ಬೇಕಾದರೆ ಬೇಕಾದಾಗ ಹೇಳುವೆ.
* * *
ಶಿಸ್ತು ನಮ್ಮ ಮನೆಯ ಪರಿಸರದ ಒಂದು ಭಾಗವಾಗಿದ್ದರೂ ನನಗೆ ಅತಿಯಾದ ರಿಸ್ಟ್ರಿಕ್ಶನ್ಸ್ ಇರಲಿಲ್ಲ. ಆದ್ದರಿಂದ ನನ್ನ ಬಾಲ್ಯ ಸ್ವತಂತ್ರ ಹಕ್ಕಿಯಂತಿತ್ತು. ಬೇಕೆನಿಸಿದಾಗ ಹಾರುವುದು , ಬೇಡೆನಿಸಿದಾಗ ಕೂರುವುದು. ಯಾವುದಕ್ಕೂ ಅತಿಯಾದ ಅಡೆ ತಡೆಗಳಿರುತ್ತಿರಲಿಲ್ಲ.
ಹೀಗಿದ್ದ ಹಕ್ಕಿಯೊಂದನ್ನು ತಂದು ಪಂಜರದಲ್ಲಿಟ್ಟರೆ ಹೇಗಾಬೇಡ??
ವಸತಿ ಶಾಲೆಯ ಹೊಸತರಲ್ಲಿ ನನಗನಿಸಿದ್ದು ಕೂಡ ಹಾಗೆ. ಅಷ್ಟು ಚಿಕ್ಕ ವಯಸ್ಸಿಗೆ ಅಷ್ಟೊಂದು ರೂಲ್ಸ್ಗಳು ಮನಸ್ಸಿಗೆ ಒಗ್ಗಿರಲಿಲ್ಲ. ಶಾಲೆಯೇ ಜೈಲಿನಂತನಿಸತೊಡಗಿತ್ತು. ಯಾರೂ ಓಡಿ ಹೋಗಬಾರದೆಂದು ಕಟ್ಟಿದ್ದ ಕಾಂಪೌಂಡ್ ಗೋಡೆಯು ಅಣುಕಿಸಿ ಛಾಲೆಂಜ್ ಮಾಡುತ್ತಿದ್ದಂತಿತ್ತು. ಯಾವತ್ತಾದರೂ ಆ ಗೋಡೆಯನ್ನು ಹಾರಿ ಹೋಗಬೇಕೆನ್ನುವ ಆಸೆ ಆದಾಗಲೇ ಮನಸ್ಸಿನ ಕೋಣೆಯಲ್ಲಿ ಗಟ್ಟಿಯಾಗಿಹೋಗಿತ್ತು.
* * *
ನವೋದಯದಲ್ಲಿ ನನಗೆ ಮೊದಲು ಜೊತೆಯಾದ ಗೆಳೆಯರೆಂದರೆ ಗೋಪಿ ಮತ್ತು ಕೆಂಚ (ಅವರ ನಿಜ ನಾಮಧೇಯ ಇದಲ್ಲದಿದ್ದರೂ ಅವರಿಗೆ ನೇರವಾಗಿ ಸಂಬಂಧವಿರುವ ಹೆಸರುಗಳಿವು). ನಮ್ಮದು ಒಂದೇ ರೂಮು ಕೂಡಾ. ಸಮಾನ ವಯಸ್ಕರಾಗಿದ್ದು ಒಂದೇ ತೆರನಾದ ಪರಿಸರದಲ್ಲಿದ್ದುದರಿಂದ ಸಮಾನ ಮನಸ್ಕರೂ ಆಗಿದ್ದೆವು. ಇದೆ ಸರಿಯಾದ ಸಮಯವೆಂದು ತಿಳಿದು ಮನಸ್ಸಿನಲ್ಲಿದ್ದ ಆಸೆಯು ತಾನೂ ಎದ್ದು ನಿಂತಿತ್ತು. ಮೂವರ ಆಸೆಯೂ ಒಂದೇ ಆದಾಗ ಸುಮ್ಮನಿರುವುದಾದರೂ ಹೇಗೆ?? ಒಂದು ಶನಿವಾರ ಹೊರಗೋಡಿ ಹೋಗುವ ಪ್ಲ್ಯಾನಿನ ನೀಲನಕ್ಷೆ ತಯಾರಾಗಿ ಮರುದಿನವೇ ಹೋಗುವುದೆಂದು ಫೈನಲ್ ಆಯಿತು. ಆದರೆ ಹೋಗುವುದಾದರೂ ಎಲ್ಲಿಗೆ???
"ದಾಮೋದರ ಸ್ಟೋರ್ಸ್" ಅಂದ ಕೆಂಚ. ಅಲ್ಲಿಗ್ಯಾಕೆ??, ಎಂದೆ ನಾನು. "ಅಲ್ಲಿಂದ ನಮ್ಮ ಸೀನಿಯರ್ ಒಬ್ಬ ಬಹಳಷ್ಟು ಕ್ರಿಕೆಟರ್ಸ್ ಕಾರ್ಡ್ ತಂದಿದ್ದಾನೆ". "ಒಃಹ್ ಹೌದಾ ನಾವು ತರೋಣ" ಕೆಂಚನ ಮಾತನ್ನು ತುಂಡರಿಸಿ ಹೇಳಿದ್ದ ಗೋಪಿ. ಹೀಗೆ ಒಂದು ಗುರಿಯೊಂದಿಗೆ ನಮ್ಮ ಪ್ಲ್ಯಾನ್ ರೆಡಿ ಆಗಿತ್ತು.
ಮರುದಿನ ಅಂದರೆ ಭಾನುವಾರದಂದು ಎಲ್ಲರೂ ಮಲಗಿದ್ದಾಗ ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಅಷ್ಟೇನೂ ಎತ್ತರವಿಲ್ಲದ ಕಡೆ ಕಾಂಪೌಂಡ್ ಜಿಗಿದು, ಬಹುದಿನದ ಕನಸನ್ನು ನನಸಾಗಿಸಿಕೊಂಡಿದ್ದೆವು. ಆದರೆ ಯಾವುದೋ ಮಾಯದಲ್ಲಿ ಅದನ್ನು ನಮ್ಮ ಪ್ರಿನ್ಸಿ ನೋಡಿದ್ದರು. ಹಾರಿ ಹೊರಗೋಡಿದ ಮೂವರ ಹುಡುಕಾಟಶಾಲೆಯಲ್ಲಿ ಆಗಲೇ ಶುರುವಾಗಿತ್ತು. ಇದಾವುದರ ಪರಿವೆ ಇಲ್ಲದಂತೆ ನಾವು ಕುಮಟಾ ಪೇಟೆಯ ಗಲ್ಲಿ ಗಲ್ಲಿ ಸುತ್ತುತ್ತಿದ್ದೆವು. ಒಳಗೊಳಗೆ ಹೆದರುತ್ತಿದ್ದರೂ ಮತ್ತೊಬ್ಬರಿಗೆ ತೋರಿಸದೇ ಎದೆ ಉಬ್ಬಿಸಿ ನಡೆಯುತ್ತಾ ಪ್ರತಿ ಕ್ಷಣವನ್ನೂ ಅನುಭವಿಸುತ್ತಿದ್ದೆವು. ಮೂವರಲ್ಲಿ ನಾನೇ ಸ್ವಲ್ಪ ಹೆದರುಪುಕ್ಕಲು. ಅದರಲ್ಲೂ ಶಾಲೆಯಲ್ಲಿರುವ ಅಕ್ಕನಿಗೆ ನಾನು ಓಡಿ ಹೋದದ್ದು ತಿಳಿದರೆ ಅನ್ನೋ ಭಯ ಬೇರೆ. ಆದರೂ ಅಳುಕನ್ನು ತೋರಿಸದೇ ಏನೋ ಸಾಧಿಸಿದ ಪುಳಕದೊಂದಿಗೆ ದಾಮೋದರ್ ಸ್ಟೋರ್ಸ್ ಮುಟ್ಟಿದೆವು. ನಾವು ಹೋಗುವುದನ್ನು ತಿಳಿದು ಕೆಲವು ಗೆಳೆಯರು ಅವರಿಗಾಗಿ ತರಲೆಂದುಉದ್ದನೆಯ ಚೀಟಿ ಕೊಟ್ಟಿದ್ದರು. ನಾವು ಹೋಗಿದ್ದನ್ನು ಯಾರಿಗೂ ತಿಳಿಸಬಾರದು ಮತ್ತು ಯಾರಾದರೂ ಕೇಳಿದರೆ ಹೇಗಾದರೂ ಪಾರು ಮಾಡಬೇಕೆಂಬ ಡೀಲ್ ನೊಂದಿಗೆ ಅವರ ಡಿಮಾಂಡನ್ನು ಒಪ್ಪಿದ್ದೆವು. ಭರದಿಂದ ಖರೀದಿ ಮುಗಿಸಿ ಬೇಗನೆ ಶಾಲೆಗೆ ಹಿಂದಿರುಗುವ ಯೋಚನೆಯಿಂದ ಸರ ಸರನೆ ಹೆಜ್ಜೆ ಹಾಕಿದ್ದೆವು.
* * *
ಇಷ್ಟೆಲ್ಲಾ ನಡೆಯುವಾಗ ಮತ್ತೊಂದು ಆವಾಂತರವಾಗಿ ಹೋಗಿತ್ತು. ನಾಗರಾಜ(ನಮಗಿಂತ 2 ವರ್ಷ ಸೀನಿಯರ್)ನ ಪೇರೆಂಟ್ಸ್ ಅವನನ್ನು ಭೇಟಿಯಾಗಲು ಶಾಲೆಗೆ ಬಂದಿದ್ದರು. ಪ್ರಿನ್ಸಿ ಅವನಿಗಾಗಿ ಹೇಳಿ ಕಳಿಸಿದರು. ಒಂದು ತಾಸಾಯ್ತು,ಎರಡು ತಾಸಾಯ್ತು ಎಷ್ಟು ಹೊತ್ತು ಆದರೂ ಅವನ ಪತ್ತೆಯೇ ಇಲ್ಲದಾಗಿತ್ತು. ಅಲ್ಲಿಗೆ ಪ್ರಿನ್ಸಿಗೆ ಖಾತರಿಯಾಗಿತ್ತು , ಓಡಿ ಹೋದವರಲ್ಲಿ ಇವನೂ ಒಬ್ಬ.
ಇಷ್ಟೆಲ್ಲಾ ನಡೆದರೂ ನಮಗೇನೂ ಗೊತ್ತೇ ಇರಲಿಲ್ಲ. ಬರುವ ದಾರಿಯಲ್ಲಿ ನಮಗೆ ನಾಗರಾಜನ ದರ್ಶನವಾಯಿತು. ನಮ್ಮ ಸಾಧನೆಯನ್ನು ಬಿಂಬಿಸುವಂತೆ ಅವನೆಡೆಗೆ ನೋಟ ಬೀರಿ , ಶಾಲೆಯ ಒಳ ಸೇರಿಕೊಳ್ಳಲು ದೌಡಾಯಿಸಿದೆವು. ಏನೂ ತೊಂದರೆ ಇಲ್ಲದೇ ನಮ್ಮ ಮೊದಲ ಪ್ರಯತ್ನದಲ್ಲಿ ಯಶ ಕಂಡಿದ್ದನ್ನು ನಮ್ಮಲ್ಲೇ ಹೇಳಿಕೊಂಡು ಸಂತೋಷಪಟ್ಟೆವು.ನಮಗೆ ನಾಳೆ ನಡೆಯಲಿದ್ದ ಮಂಗಳಾರತಿಯ ಬಗ್ಗೆ ಗೊತ್ತೇ ಇರಲಿಲ್ಲ !!
* * *
ಸೋಮವಾರ ಬೆಳಿಗ್ಗೆ, ಶಾಲೆಯ ಪ್ರಾರ್ಥನೆಯ ಸಮಯ.
ಕೆಂಚ ಮತ್ತು ಗೋಪಿಗೆ ಪ್ರಿನ್ಸಿಯಿಂದ ಬುಲಾವ್ ಬಂದಿತ್ತು. ನನಗೆ ಬಂದಿರದಿದ್ದರೂ ನಾನು ಹೆದರಿ ಬೆವರಿ ತೊಯ್ದು ತೊಪ್ಪೆಯಾಗಿ ಹೋಗಿದ್ದೆ. ಅವರನ್ನು ಕರೆದದ್ದು ಓಡಿ ಹೋಗಿದ್ದಕ್ಕೆ ಎಂದು ನನಗೆ ಖಾತ್ರಿಯಾಗಿತ್ತು. ಅಲ್ಲೇ ಚೆಂಬರ್ ಸುತ್ತ ಮುತ್ತ ತಿರುಗುತ್ತಾ ಅಲ್ಲೇನು ನಡೆಯುತ್ತಿದೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೆ. ಅಷ್ಟರಲ್ಲಿ ಪ್ರಾರ್ಥನೆಯ ಘಂಟೆ ಹೊಡೆಯಿತು, ಎಲ್ಲರೂ ಸಾಲಿನಲ್ಲಿ ಬಂದು ನಿಂತಿದ್ದೂ ಆಯಿತು. ಅಷ್ಟಾದರೂ ಕೆಂಚ ಮತ್ತು ಗೋಪಿ ಬಂದಿರಲಿಲ್ಲ. ಪ್ರಾರ್ಥನೆ ಶುರುವಾಯಿತು. ಆಗಲೂ ನಾನು ಮಾತ್ರ ಅವರಿಬ್ಬರಿಗಾಗಿ ನಿಂತಲ್ಲೇ ಹುಡುಕುತ್ತಿದ್ದೆ.
ಪ್ರಾರ್ಥನೆಯ ಕಡೆಯಲ್ಲಿ ಪ್ರಿನ್ಸಿ ಮೈಕ್ ಬಳಿ ಬಂದು ಮೂರು ಹುಡುಗರು ನಿನ್ನೆ ಓಡಿ ಹೋದ ಕಥೆ ಹೇಳತೊಡಗಿದರು. ಯಾರವರು ಯಾರವರು ಎಂದು ಆಗಲೇ ಗುಸು ಗುಸು ಶುರುವಾಗಿತ್ತು. ನಿಂತಲ್ಲೇ ನನಗೆ ನನ್ನ ಎದೆ ಬಡಿತ ಕೇಳಿದ ಅನುಭವ. ಕ್ಲಾಸಿನಲ್ಲಿ ಬೈದರೇ ನಾಚಿಕೆ ಅಂದು ಕೊಳ್ಳುತ್ತಿದ್ದ ನನ್ನಂತವರಿಗೆ ಎಲ್ಲರ ಮುಂದೆ ಬೈದರೆ ಹೇಗಾಗಬೇಡ? ಕೊನೆಯಲ್ಲಿ ಪ್ರಿನ್ಸಿ ಅವರ ಹೆಸರುಗಳನ್ನು ಹೇಳತೊಡಗಿದರು.
" ಕೆಂಚ" ........"ಗೋಪಿ"......ಮೂರನೇ ಹೆಸರು ನನ್ನದೇ ಎಂದು ಕಣ್ಣು ಗಟ್ಟಿಯಾಗಿ ಮುಚ್ಚಿಕೊಂಡಿದ್ದೆ. "ನಾಗರಾಜ" ಅಂತು..... ಪ್ರಿನ್ಸಿ ಧ್ವನಿ....ಅಲ್ಲಿಗೆ ಮೂರೂ ಹೆಸರುಗಳೂ ಮುಗಿದಿದ್ದವು. ನನ್ನ ಹೆಸರೇ ಇಲ್ಲದ್ದರಿಂದ ನಾನು ಆಶ್ಚರ್ಯಗೊಂಡೆ. (ಒಳಗೊಳಗೆ ಕುಣಿದಾಡಿದೆ ಎಂದು ಬೇರೆ ಹೇಳಬೇಕಿಲ್ಲ ಅಲ್ವಾ?) ಮೂವರೂ ಸ್ಟೇಜಿಗೆ ಬಂದು ಎಲ್ಲರ ಮುಂದೆ ತಪ್ಪೊಪ್ಪಿಗೆ ಪತ್ರ ಓದಿದ್ದೂ ಆಯ್ತೂ ಅದಕ್ಕೆ ಹಿಮ್ಮೇಳ ನೀಡುವಂತೆ ಎಲ್ಲರೂ ನಕ್ಕಿದ್ದೂ ಆಯ್ತು. ಇಷ್ಟಾದರೂ ನನ್ನನ್ನು ಕಾಡುತ್ತಿದ್ದ ಪ್ರಶ್ನೆ ಒಂದೇ,
ನನ್ನ ಹೆಸರು ಇರಲಿಲ್ಲಾ ಯಾಕೆ ???
* * *
ಆಮೇಲೆ ತಿಳಿದ ಸಂಗತಿ ಏನೆಂದರೆ, ಪ್ರಿನ್ಸಿ ನಾಗರಾಜನನ್ನು ಬೆಳಿಗ್ಗೆನೆ ಕರೆದು ಬೆದರಿಸಿ ವಿಚಾರಿಸಿದ್ದರು. ನಿನ್ ಜೊತೆ ಇದ್ದ ಮತ್ತೆ ಇಬ್ಬರು ಯಾರು???
"ನಾನು ಒಬ್ಬನೇ ಹೋಗಿದ್ದೆ" ಸಾರ್.
..ಛಾಟ್...!!!
ಮತ್ತೆ ಪ್ರಿನ್ಸಿ, "ನಿನ್ ಜೊತೆ ಇದ್ದ ಮತ್ತೆ ಇಬ್ಬರು ಯಾರು??? "........
"ನಾನು ಒಬ್ಬನೇ ಹೋಗಿದ್ದೆ" ಅಂತ ಅವನು (ಸತ್ಯ) ಹೇಳಿದಷ್ಟೂ ಬಾರಿ ಒಂದೊಂದು ಹೊಡೆತ ಬೀಳುತ್ತಿತ್ತು. ಹೊಡೆತಕ್ಕೆ ಹೆದರಿ ಪಾಪ ಬಡಪಾಯಿ ಇಬ್ಬರ ಹೆಸರು ಹೇಳಿಬಿಟ್ಟಿದ್ದ. ಕೆಂಚ ಮತ್ತು ಗೋಪಿ. ಆಗ ಅವನಿಗೆ ಮೊದಲು ನೆನಪಿಗೆ ಬಂದ ಹೆಸರುಗಳು ಅವು. ಹೀಗೆ ಓಡಿ ಹೋದವರ ಲಿಸ್ಟ್ ನಿಂದ ನನ್ನ ಹೆಸರು ಕಾಣೆಯಾಗಿತ್ತು. ಅಷ್ಟಾದರೂ ಅವರಿಬ್ಬರು ಪ್ರಿನ್ಸಿ ಮುಂದೆ ನನ್ನ ಹೆಸರು ಹೇಳಿರಲಿಲ್ಲ.
6ನೇ ಕ್ಲಾಸಿನಲ್ಲೇ ಎಷ್ಟು ತಿಳುವಳಿಕೆ ಅಲ್ವಾ ಅವರಿಗೆ??
ಥ್ಯಾಂಕ್ಸ್ ಕಣ್ರೋ....
isn't it a ಗ್ರೇಟ್ ಎಸ್ಕೇಪ್ ??
ನಿಮ್ಮವ,
ಹರಟೆ ಮಲ್ಲ